PANJANDHAYA BANTA VAIDYANATHA

KORAGATHANIYA DAIVADA AADISTHALA

ಶ್ರೀ ಪಂಜಂದಾಯ (ಪಂಜಣತ್ತಾಯ) ಬಂಟ ದೈವವು ಗಂಟೆಯ ಸ್ವರೂಪದಲ್ಲಿ ಉಕ್ಕೂರುದ ಗುಡ್ಡೆ ಎಂಬ ಹೆಸರಿನ ಕಾಡಿನಲ್ಲಿ ಕಾಣಿಸಿಕೊಂಡು ಬಳಿಕ ಭಂಡಾರಬೈಲಿನಲ್ಲಿ ನೆಲೆವೂರಿತು. ಕೆಲಕಾಲದ ನಂತರ ಉದ್ಯಾವರ ಮಾಡದ ಅರಸು ದೈವಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಕುತ್ತಾರು ಆರಸುಕಟ್ಟೆಯಲ್ಲಿ ಬಂದು ನೆಲೆಸುತ್ತಾರೆ. ಅವರಿಗೂ ಗ್ರಾಮ ದೈವವಾದ ಶ್ರೀ ಪಂಜಂದಾಯ ಬಂಟ ದೈವಗಳಿಗೆ ಏಳು ರಾತ್ರಿ ಏಳು ಹಗಲು ಯುದ್ಧ ನಡೆದರೂ ಸೋಲು-ಗೆಲುವು ನಿಶ್ಚಯವಾಗಲಿಲ್ಲ…
ಕದ್ರಿ ದೇವಸ್ಥಾನದಲ್ಲಿ ಮಾಯವಾದ ಕಾರಣಿಕದ `ಶಕ್ತಿಯಾದ ಕೊರಗತನಿಯ (ಕೊರಗಜ್ಜ) ದೈವವು ಸೋಮೇಶ್ವರ ಒಂಭತ್ತು ಮಾಗಣೆಯ ಸೀಮೆ ದೇವರಾದ ಶ್ರೀ ಸೋಮನಾಥ ದೇವರಿಗೆ ದಂಟೆಯ (ಕಾಸರಕ ಮರದ ಕೋಲು) ಕಾಣಿಕೆ ಸಲ್ಲಿಸಿ, ಕಲ್ಲಾಪಿನ ಉದಿಪು ಕಲ್ಲಿಗೆ ಬಂದು ನೋಡುವಾಗ ಕಲ್ಲಾಡೆ ಕಲ್ಲಿನ ಹಾಸಿಗೆಯಲ್ಲಿ (ಉದ್ಭವ ಕಲ್ಲು) ಪಂಜಂದಾಯ (ಪಂಜಣತ್ತಾಯ) ಬಂಟ ದೈವಗಳು ಚಿಂತಾಕ್ರಾಂತರಾಗಿರುವುದನ್ನು ಕಂಡಿತು. ಕೊರಗತನಿಯ (ಕೊರಗಜ್ಜ) ದೈವವು ಕಲ್ಲಾಡೆ ಬನಕ್ಕೆ ಆಗಮಿಸಿ ಪಂಜಂದಾಯ ಬಂಟ ದೈವಗಳಿಗೆ ದಂಟೆ, ಕಾಣಿಕೆ ಸಲ್ಲಿಸಿ, ನನ್ನಿಂದ ಏನಾಗಬೇಕೆಂದು ಕೇಳುವಾಗ, ಪಂಜಂದಾಯ ದೈವಗಳು ಅರಸು ದೈವಗಳ ಆಕ್ರಮಣದ ಬಗ್ಗೆ ವಿವರಿಸುತ್ತವೆ.
ಆಗ ಕೊರಗ ತನಿಯ (ಕೊರಗಜ್ಜ) ದೈವವು “ಅರಸು ದೈವಗಳನ್ನು ನಿಮ್ಮ ಪರಿಧಿಯಿಂದ ಬಿಡಿಸಿದರೆ ನನಗೇನು ಕೊಡುವಿರಿ?” ಎಂದು ಮಾತು ಕೇಳುತ್ತದೆ. ಆಗ ಪಂಜಂದಾಯ (ಪಂಜಣತ್ತಾಯ) ದೈವವು “ನಮ್ಮಿಂದ ಸಾಧ್ಯವಾಗದ ಕೆಲಸವನ್ನು ನೀನು ಮಾಡುತ್ತಿ ಎನ್ನುವ ನಂಬಿಕೆ ಏನು?” ಎಂದು ಪ್ರಶ್ನಿಸಿದಾಗ, ಕೊರಗತನಿಯ (ಕೊರಗಜ್ಜ) ದೈವವು ತನ್ನ ವಿರಾಟ ರೂಪವನ್ನು ತೋರಿಸುತ್ತದೆ. ಅದರ ವಿರಾಟ ರೂಪ ನೋಡಿದ ದೈವಗಳಿಗೆ ಇವನಿಂದ ಈ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಮನವರಿಕೆ ಆಗುತ್ತದೆ. ಅರಸು ದೈವಗಳನ್ನು ನನ್ನ ವ್ಯಾಪ್ತಿಯಿಂದ ಬಿಡಿಸಿದರೆ ನಿನಗೆ ಊರಿನಲ್ಲಿ ಅಡುಗೆ ಮಾಡಿಸಿ ಕಾಡಿನಲ್ಲಿ ಬಡಿಸಿ ನರ್ತನ ಸೇವೆ ಮಾಡಿಸಿ (ಬೈಲ್‌ಡ್ ಅಟಿಲ್‌, ಕಾಡ್‌ಡ್ ಮೆಚ್ಚಿ), ನಿನ್ನ ಏಳು ವರ್ಗ (ಏಳು ಆದಿಸ್ಥಳಗಳು) ವನ್ನು ನಿನಗೆ ಕೊಟ್ಟು, ಅಲ್ಲಿ ನಿನ್ನ ಸೇವೆ ಮಾಡಲು ಕತ್ತಲಿನಲ್ಲಿ ಬೆಂಕಿ, ಬೆಳಕು (ತೂ, ತುಡರ್) ಇಲ್ಲದೆ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿಯನ್ನು ನಿನಗೆ ನೀಡುತ್ತೇವೆ” ಎಂದು ಪಂಜಂದಾಯ ದೈವವು ಕೊರಗತನಿಯನಿಗೆ (ಕೊರಗಜ್ಜ) ವಾಗ್ದಾನ ನೀಡುತ್ತದೆ.

ಪಂಜಂದಾಯ ದೈವದಿಂದ ವಾಗ್ದಾನ ಪಡೆದ ಕೊರಗತನಿಯನು ಕುತ್ತಾರುಗುತ್ತಿಗೆ ತೆರಳಿ ಕಪಿಲೆ ದನವನ್ನು (ಗೆಂದೆ, ಕಬುಲ್ತಿ) ಮಾಯರೂಪದಲ್ಲಿ ಸೃಷ್ಟಿ ಮಾಡಿ, ಅದನ್ನು ಕೊಂದು ಅದರ ಕಾಲು (ಪಾರೆ) ಕಡಿದು, ತನ್ನ ಶಿರಕವಚದಲ್ಲಿ (ಮುಟ್ಟಾಲೆ) ಇಟ್ಟುಕೊಂಡು, ಅರಸುಕಟ್ಟೆಯಲ್ಲಿ ವಿರಾಜಮಾನರಾದ ಅರಸು ದೈವಗಳ ಬಳಿ ತೆರಳಿ “ನೀವು ಧರ್ಮದ ಕಟ್ಟಿನ ಪ್ರಕಾರ ನಿಮ್ಮ ಜಾಗಕ್ಕೆ ಹೋಗಬೇಕು. ಇಲ್ಲದಿದ್ದರೆ ಈ ಪಾರೆಯನ್ನು (ಕಾಲು) ಎಸೆದು ನಿಮ್ಮನ್ನು ಓಡಿಸುತ್ತೇನೆ” ಎಂದು ಹೇಳುತ್ತಾನೆ. ಶುಧ್ದಾಚಾರದ ದೈವಗಳಾದ ಅರಸು ದೈವಗಳು ಪಾರೆಯನ್ನು (ಕಾಲು) ನೋಡಿ, ಅಲ್ಲಿಂದ ತಮ್ಮ ಸ್ವಕ್ಷೇತ್ರವಾದ ಉದ್ಯಾವರ ಮಾಡಕ್ಕೆ ತೆರಳುತ್ತಾರೆ. ಆ ಪ್ರಕಾರ ತನ್ನ ಮಾತು ಉಳಿಸಿದ ಕೊರಗತನಿಯ (ಕೊರಗಜ್ಜ) ದೈವಕ್ಕೆ ಪಂಜಂದಾಯ ದೈವಗಳು ವಾಗ್ದಾನ ನೀಡಿದಂತೆ ಏಳು ಕಲ್ಲು, ಏಳು ವರ್ಗ ತುಂಡು ಗ್ರಾಮಗಳನ್ನು ನೀಡುತ್ತಾರೆ.

ಈ ಏಳು ಆದಿಸ್ಥಳಗಳ ಮೂಲದೈವಗಳಾದ ಸಿರಿಗಳಿಗೆ ಬೇರೆ ಜಾಗವನ್ನು ಕೊಟ್ಟು ಈ ಜಾಗವನ್ನು ಕೊರಗತನಿಯನಿಗೆ (ಕೊರಗಜ್ಜನಿಗೆ) ಪಂಜಂದಾಯ ದೈವವು ನೀಡಿತು. ಆದ್ದರಿಂದ ಕೊರಗತನಿಯನಿಗೆ (ಕೊರಗಜ್ಜನಿಗೆ) ಕೋಲ ನಡೆಯುವ ಸಂದರ್ಭದಲ್ಲಿ ಈ ದೈವಗಳಿಗೆ ಮೊದಲ ಪ್ರಾಧಾನ್ಯತೆ ನೀಡಲಾಗುತ್ತದೆ (ಪ್ರಥಮ ಸೇವೆ),
ಸಿರಿಗಳಿಗೆ ‘ಏನ್ಮಮಂದೆ ಪಿದಾಯಿಯಾಯಿನಕುಲು’ ಮತ್ತು ‘ಮೆರರ್ ದೈವಗಳು’ ಎಂದು ಕರೆಯುತ್ತಾರೆ. (ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು, ಒಂದು ಅಕ್ಕ ಮದಿಮಾಲ್ ಮತ್ತು ಸಂಕೊಲೆಗುಳಿಗ, ಸುಣ್ಣಲಾಯಿ ಹಾಗೂ ಪಿಲಿಭೂತ). ಅನಾದಿಕಾಲದಲ್ಲಿ ಈ ಎಲ್ಲಾ ದೈವಗಳು ಇಂದಿನ ಕೊರಗತನಿಯ (ಕೊರಗಜ್ಜ) ದೈವದ ಏಳು ಆದಿಸ್ಥಳಗಳಲ್ಲಿ ವಿರಾಜಮಾನವಾಗಿದ್ದವು. ಪಂಜಂದಾಯ ದೈವವು ಈ ದೈವಗಳಿಗೆ ಬೇರೆ ಸ್ಥಳಗಳನ್ನು ನೀಡಿತು. ಈ ಜಾಗವು ದೊರೆಯುವ ಮೊದಲು ಕದ್ರಿಯ ದೇವಸ್ಥಾನದಲ್ಲಿ ಮಾಯವಾದ ಕೊರಗತನಿಯನು (ಕೊರಗಜ್ಜನು) ಮಾಯಾ ರೂಪದಲ್ಲಿ ಸಂಚಾರ ಮಾಡಿಕೊಂಡಿದ್ದನು.
ಹಿರಿಯ ತಲೆಮಾರಿನವರು ಹೇಳಿಕೊಂಡು ಬಂದ ಹಾಗೆ ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಮತ್ತು ಶ್ರೀ ಕೊರಗತನಿಯ ದೈವಗಳ ನೇಮ-ನಿಯಮ, ಜಾತ್ರೆ-ಕೋಲಗಳು, ಮುನ್ನೂರು ಗ್ರಾಮದ ತಂತ್ರಿಗಳ ಮಾರ್ಗದರ್ಶನದಲ್ಲಿ, ಮಾಗಣತ್ತಡಿ ಮನೆತನದವರ ಅನುವಂಶಿಕ ಆಡಳಿತದಲ್ಲಿ ಮತ್ತು ಮೂರು ಗುತ್ತುಗಳಾದ ಕುತ್ತಾರು ಗುತ್ತು, ಕಲ್ಲಾಲ ಗುತ್ತು, ಬೊಲ್ಯ ಗುತ್ತು ಹಾಗೂ ಗೇಣಿಮನೆ ಮನೆ ಬಾಳಿಕೆಯವರ ಮುಂದಾಳತ್ವದಲ್ಲಿ ಜೊತೆಗೆ ನೂರಾರು ಸೇವಚಾಕರಿಯವರ ನಿಸ್ವಾರ್ಥಸೇವೆಯೊಂದಿಗೆ ಪರಂಪರೆಯಿಂದ ನಡೆದುಕೊಂಡು ಬಂದಿರುವ ಕಟ್ಟುಕಟ್ಟಲೆಗೆ ಚ್ಯುತಿಬಾರದಂತೆ ಈಗಲೂ ನಡೆದುಕೊಂಡು ಬಂದಿರುತ್ತದೆ.
ಮಾಗಣತ್ತಡಿ ಮನೆತನದವರನ್ನು ಶ್ರೀ ಪಂಜಂದಾಯ ಹಾಗೂ ಕೊರಗತನಿಯ ದೈವವು ‘ಕಲ್ಲಾಲಗುತ್ತು ಎಂದು ಸಂಬೋಧಿಸುತ್ತದೆ. ಶ್ರೀ ಪಂಜಂದಾಯ ಬಂಟ ಕೊರಗ ತನಿಯ ದೈವದ ಆಭರಣ ಹಾಗೂ ಶ್ರೀ ಕೊರಗತನಿಯ ದೈವದ ಭಂಡಾರ (ದಂಟೆ, ಮುಟ್ಟಾಳೆ) ಮಾಗಣತ್ತಡಿ ಮನೆಯಲ್ಲಿಯೇ ಇರುವುದು ಕಟ್ಟಳೆಯಾಗಿದೆ.

ಕೊರಗ ತನಿಯನ (ಕೊರಗಜ್ಜನ) ಏಳು ಆದಿಸ್ಥಳಗಳಲ್ಲಿ ಯಾವುದೇ ರೀತಿಯ ಗುಡಿಗೋಪುರಗಳು, ಮೂರ್ತಿ ಆರಾಧನೆಗಳು, ದೀಪಧೂಪ ಇಂತಹ ಆರಾಧನೆಗಳಿಗೆ ಆಸ್ಪದವಿಲ್ಲ. ಇದು ಅನಾದಿಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ.
ಕೊರಗತನಿಯ ದೈವದ (ಕೊರಗಜ್ಜನ) ಏಳು ಆದಿಸ್ಥಳಗಳು:
ಅನಾದಿಕಾಲದಲ್ಲಿ ಗ್ರಾಮದೈವಗಳಾದ ಶ್ರೀ ಪಂಜಂದಾಯ ಬಂಟದೈವಗಳಿಗೂ, ಕನೀರುತೋಟ ಶ್ರೀ ಮಲೆಯಾಳಿ ಚಾಮುಂಡಿ ದೈವಗಳಿಗೂ ಕಲಹ ಉಂಟಾದ ಸಮಯದಲ್ಲಿ ಶ್ರೀ ವೈದ್ಯನಾಥ ದೈವವು ಶ್ರೀ ಸೋಮನಾಥ ದೇವರ ಅನುಗ್ರಹವನ್ನು ಪಡೆದು ಈ ದೈವಗಳ ನಡುವೆ ರಾಜಿಪಂಚಾತಿಕೆ ಮಾಡಲು ಮುಂದಾಗುತ್ತದೆ. ವೈದ್ಯನಾಥ ದೈವವು ಶ್ರೀ ಪಂಜಂದಾಯ ದೈವದ ಬಳಿ ಇದ್ದ ಬೆಳ್ಳಿ ಚೆಂಡನ್ನು ಎಸೆಯಲು ಹೇಳುತ್ತದೆ. ಬಾರ್ದೆ ಕಟ್ಟ ಎನ್ನುವ ಸ್ಥಳದಿಂದ ಎಸೆದ ಆ ಚೆಂಡು ಕನ್ನಡಕೆರೆಗೆ ಬಂದು ಬೀಳುತ್ತದೆ. ಈ ಪರಿಧಿಯು ಶ್ರೀ ಪಂಜಂದಾಯ ದೈವದ ಪರಿಧಿಯೆಂದು ವೈದ್ಯನಾಥ ದೈವವು ತೀರ್ಮಾನಿಸುತ್ತದೆ. ಮಲೆಯಾಳಿ ಚಾಮುಂಡಿ ದೈವದ ಬಳಿ ಇದ್ದ ಕಂಚಿನ ಚೆಂಡನ್ನು ಬಾರ್ದ ಕಟ್ಟ ಎಂಬ ಸ್ಥಳದಿಂದ ಎಸೆದಾಗ ಕನೀರುತೋಟದ ಬಳಿಯ ಕೆದಿಲಾಯ ಕಟ್ಟೆಗೆ ಬಂದು ಬೀಳುತ್ತದೆ. ಈ ಚೆಂಡು ಬಿದ್ದ ಜಾಗವನ್ನು ಮಲೆಯಾಳಿ ಚಾಮುಂಡಿ ದೈವಗಳ ಪರಿಧಿಯೆಂದು ವೈದ್ಯನಾಥ ದೈವವು ತೀರ್ಮಾನಿಸುತ್ತದೆ. ತಮ್ಮ ಕಲಹವನ್ನು ಪರಿಹರಿಸಿದ ವೈದ್ಯನಾಥ ದೈವಕ್ಕೆ ಶ್ರೀ ಪಂಜಂದಾಯ ಬಂಟ ದೈವಗಳು ತಮ್ಮ ಸಿರಿಮುಡಿಯಲ್ಲಿಯೇ ಸೇವೆ ಕೊಡುತ್ತೇವೆಂದು ವಾಗ್ದಾನ ನೀಡುತ್ತಾರೆ. ಇಂದಿಗೂ ಈ ಸಂಪ್ರದಾಯ ನಡೆಯುತ್ತಿದೆ.
ತುಳು ಸಂಸ್ಕೃತಿಯ ಆಟಿ ತಿಂಗಳು ಕಳೆದು ಸೋಣ ಸಂಕ್ರಮಣದಂದು ಶ್ರೀ ಪಂಜಂದಾಯ ಬಂಟ ವೈದ್ಯನಾಥ ದೈವಗಳಿಗೆ ಗ್ರಾಮದ ವತಿಯಿಂದ ರಾತ್ರಿ ತುಡರ ಬಲಿ ಸೇವೆ, ಶ್ರೀ ಪಂಜಂದಾಯದ ದೈವದ ಅಪ್ಪಣೆಯಂತೆ ಕೊರಗತನಿಯ ದೈವದ ಎರಡು ಆದಿಸ್ಥಳಗಳಲ್ಲಿ [1. ದೆಕ್ಕಾಡು ಮಂಜಪಲ್ತಮಣ್ಣು 2. ಸ್ವಾಮಿ ತಲ (ಸೋಮೇಶ್ವರ)] ಇಲ್ಲಿ ಗ್ರಾಮದ ವತಿಯಿಂದ ಎರಡು ಕೋಲಗಳನ್ನು ನಡೆಸುವುದು; ಉಳಿದ ಐದು ಆದಿಸ್ಥಳಗಳಲ್ಲಿ ಭಂಡಾರದ ವತಿಯಿಂದ ಕೋಲಗಳನ್ನು ನಡೆಸಿ, ನಂತರ ಭಕ್ತರ ಹರಕೆಯ ಕೋಲಗಳನ್ನು ನಡೆಸುವುದು ಇಲ್ಲಿನ ಸಂಪ್ರದಾಯ; ಕೊರಗತನಿಯ ದೈವದ ಆದಿಸ್ಥಳಗಳಲ್ಲಿ ಆರರಲ್ಲಿ ಭಕ್ತರ ಹರಕೆಯ ಕೋಲಗಳನ್ನು ನಡೆಸಬಹುದು; ಒಂದು ಆದಿಸ್ಥಳ (ಸ್ವಾಮಿ ತಲ ಸೋಮೇಶ್ವರ) ಇಲ್ಲಿ ಗ್ರಾಮದ ವಂತಿಕೆಯ ಒಂದು ಕೋಲ ನಡೆಸುವುದು. ಇದು ಅನಾದಿಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ.
ಕೊರಗತನಿಯ ದೈವಕ್ಕೆ ಹಿಂದಿನ ಕಾಲದಲ್ಲಿ ‘ತಡ್ಪೆದ ಅಗೆಲು ಸೇವೆ’ಯನ್ನು ತಮ್ಮ ತಮ್ಮ ಮನೆಗಳಲ್ಲೇ ಹರಕೆಯ ರೂಪದಲ್ಲಿ ಸಲ್ಲಿಸುತ್ತಿದ್ದರು. ಇದನ್ನು ಹರಕೆ ಹೇಳಿದವರ ಮನೆಯಲ್ಲಿ ಎಲ್ಲಿಯೂ ನಡೆಸಬಹುದು. ಕೊರಗತನಿಯ ದೈವದ ಆದಿಸ್ಥಳಗಳಲ್ಲಿ ಅಗೆಲು ನೀಡುವ ಸಂಪ್ರದಾಯವಿಲ್ಲ. ಈ ಅಗೆಲು ಹರಕೆ ನೀಡಲು ಯಾವುದೇ ಸ್ಥಳ ಪ್ರದೇಶಗಳ ನಿಯಮವಿಲ್ಲ: ಅದನ್ನು ಎಲ್ಲಿಯೂ ನಡೆಸಬಹುದು.
ಭಕ್ತಾದಿಗಳಿಗೆ ಸೂಚನೆ : ಶ್ರೀ ಪಂಜಂದಾಯ ದೈವದ ವರ ಪ್ರಸಾದದಿಂದ , ಶ್ರೀ ಕೊರಗತನಿಯ ದೈವವು ಪಡೆದ 7 ಆದಿ ಸ್ಥಳಗಳ ಪೈಕಿ 6 ಸ್ಥಳಗಳಲ್ಲಿ ತನ್ನ ಭಕ್ತರ ಹರಕೆಯ ಕೋಲಗಳನ್ನು ಅನಾಧಿ ಕಾಲದಿಂದಲೂ ದೀಪ ಬೆಳಕುಗಳಿಲ್ಲದೆ ಕತ್ತಲಲ್ಲೇ ಸ್ವೀಕರಿಸಿ,ಹರಸುತ್ತಾ ಬಂದಿರುತ್ತಾರೆ. ಈ 7 ಆದಿ ಸ್ಥಳಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಆದಿ ಸ್ಥಳಗಳು ಕೊರಗತನಿಯ ದೈವಕ್ಕೆ ಇರುವುದಿಲ್ಲ.ಇಲ್ಲಿ ಸಾಯಂಕಾಲ ಗಂಟೆ 6.30 ರಿಂದ ಬೆಳಗ್ಗೆ ಗಂಟೆ 6.30 ರವರೆಗೆ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ.ಇಲ್ಲಿ ಯಾವುದೇ ಕಾರಣಕ್ಕೂ ಫೊಟೋ ಅಥವಾ ಚಿತ್ರೀಕರಣವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ.
ಶ್ರೀ ಪಂಜಂದಾಯ ಬಂಟ ವೈಧ್ಯನಾಥ ಹಾಗೂ ಕೊರಗತನಿಯ ದೈವಗಳು ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಪರಿವಾರದವರನ್ನು ಆರೋಗ್ಯ,ಐಶ್ವರ್ಯ,ನೆಮ್ಮದಿಯಿಂದ ಸದಾಕಾಲ ಹರಸಲಿ.