PANJANDHAYA BANTA VAIDYANATHA

KORAGATHANIYA DAIVADA AADISTHALA

ಕೊರಗತನಿಯನ ಹುಟ್ಟಿನ ಕಥೆ

ತುಳುನಾಡು ದೈವದೇವರುಗಳ ನೆಲೆಬೀಡು. ಇಲ್ಲಿಯ ಜನ, ಸಂಸ್ಕೃತಿ, ಆಚಾರ-ವಿಚಾರ, ಆರಾಧನೆ, ನಂಬಿಕೆ-ನಡಾವಳಿ ಎಲ್ಲವೂ ವಿಶಿಷ್ಟ ಮತ್ತು ವಿಶೇಷವುಳ್ಳದ್ದಾಗಿದೆ. ದೈವಾರಾಧನೆ ತುಳುನಾಡಿನ ಮೂಲ ಆರಾಧನೆಗಳಲ್ಲಿ ಒಂದಾಗಿದ್ದು, ಇಲ್ಲಿಯ ಜನ ಭಯ-ಭಕ್ತಿಗಳಿಂದ ದೈವಗಳ ಮೇಲೆ ನಂಬಿಕೆಯಿಟ್ಟು ಆರಾಧನೆ ಮಾಡುತ್ತಾ ಬಂದಿದ್ದಾರೆ. ಬಹಳ ಸರಳವಾಗಿ ಈ ಆರಾಧನೆಗಳು ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು, ನಂಬಿಕೊಂಡವರಿಗೆಲ್ಲಾ ದೈವ ಇಂಬು ಕೊಡುತ್ತಾ ಕಷ್ಟಕಾರ್ಪಣ್ಯಗಳನ್ನು ದೂರಮಾಡುತ್ತಾ ಬದುಕನ್ನು ಚೆಲುವಾಗಿಸಿದೆ-ಗೆಲುವಾಗಿಸಿದೆ.
ದೈವಗಳನ್ನು ಪ್ರಾಣಿಮೂಲ, ಮನುಷ್ಯಮೂಲ ಮತ್ತು ಪುರಾಣ ಮೂಲಗಳ ದೈವಗಳೆಂದು ಆರಾಧನೆ ಮಾಡುತ್ತಿರುವುದು ವಿಶೇಷವಾಗಿ ಕಾಣಬರುತ್ತಿದೆ. ಮನುಷ್ಯ ಮೂಲದಿಂದ ಬಂದ ದೈವಗಳು ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಸಿಡಿದು ನಿಂತು ಕಾಯಬಿಟ್ಟು ಮಾಯ ಸೇರಿ ವಿಶೇಷ ಶಕ್ತಿಗಳನ್ನು ಪಡೆದು ಆರಾಧನೆಗೆ ಒಳಗಾದವರು. ಇಂಥವರಲ್ಲಿ ಕೊರಗತನಿಯ ಅಥವಾ ಕೊರಗಜ್ಜ ದೈವವೂ ಬಹಳ ಮಹತ್ವದ್ದಾಗಿದೆ.
ಕೊರಗತನಿಯನ ತಂದೆ ‘ವರವನ ಓಡಿ’, ತಾಯಿ ‘ಕೊರಪೊಲುಮೈರೆ’ ತನಿಯನು ಮೂವತ್ತು ದಿನದ ಮಗುವಾಗಿದ್ದಾಗಲೇ ಅವನ ತಾಯಿಯು ತೀರಿಕೊ೦ಡಳು, ಆಮೇಲೆ, ತಂದೆಯೂ ತೀರಿಕೊಂಡನು. ಕೊರಗತನಿಯನಿಗೆ ದಿಕ್ಕು ದೆಸೆ ಇಲ್ಲದಾಯಿತು. ನಡುರಾತ್ರಿಯ ಹೊತ್ತಿಗೆ ತನಿಯನು ಜವಂದ ಮಲೆ ಬಿಟ್ಟು ಹೊರಟನು. ಅವನು ಬೊಳುಂಗರಿಯ ಹೊಯಿಗೆಯಲ್ಲಿ ದಡ್ಡಲಕಾಯಿಯನ್ನು ತೆಂಗಿನಕಾಯಿ ಎಂದೂ ಹೊಯಿಗೆಯನ್ನು ಅಕ್ಕಿ ಎಂದೂ ಇಟ್ಟು ಪೂರ್ವದಿಕ್ಕಿಗೆ ಮುಖಮಾಡಿ ದೇವರಿಗೆ ಕೈ ಮುಗಿದನು. ಆಗ ಅಲ್ಲಿ ಅವನಿಗೆ ಮೈರಕ್ಕೆ ಬೈದೆತಿ ಕಾಣಿಸಿಕೊಂಡಳು. ಅವಳು ಕೊರಗತನಿಯನ ಅನಾಥ ಸ್ಥಿತಿಯನ್ನು ಕಂಡು ಮನಸ್ಸು ಕರಗಿ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮಗನ ಹಾಗೆ ಪ್ರೀತಿಯಿಂದ ಸಾಕಿದಳು.
ತನಿಯನು ಎಣ್ಸೂರು ಬರಿಕೆಯಲ್ಲಿ ಮೈರಕ್ಕೆ ಬೈದ್ಯೆತಿಯ ಆಶ್ರಯದಲ್ಲಿ ಬೆಳೆದು ದೊಡ್ಡವನಾದನು. ಅವನು ಸಾವಿರ ಕೈ ಬುಟ್ಟಿಗಳನ್ನು ಮಾಡಿ ದೇವಸ್ಥಾನಕ್ಕೆ ಒಪ್ಪಿಸಿ ತನ್ನ ತಾಯಿ ತಂದೆಯ ಹರಕೆಯನ್ನು ತೀರಿಸುತ್ತಾನೆ. ಬಳಿಕ ಸಾಕು ತಾಯಿ ಮೈರಕ್ಕೆ ಬೈದೆತಿಯು ಮಾಡ ಮೈಸಂದಾಯ ದೈವಸ್ಥಾನಕ್ಕೆ ಏಳು ಹೊರೆಗಳ (ತಿರಿ ಬಾರೆ ಮೊಂಡ) ಹರಕೆ ತೀರಿಸುವ ಬಯಕೆಯನ್ನು ತನಿಯನಲ್ಲಿ ಹೇಳುತ್ತಾಳೆ, ತನಿಯನು ಏಳು ಜನರ ಹೊರೆಯನ್ನು ತಾನು ಒಬ್ಬನೇ ಹೊತ್ತುಕೊಂಡು ಹೋಗುತ್ತೇನೆ ಎಂದು ಹೇಳಿ, ಹೊರೆಗಳನ್ನು ಹೊತ್ತುಕೊಂಡು ದೈವಸ್ಥಾನಕ್ಕೆ ಹೋಗುತ್ತಾನೆ. ಅಲ್ಲಿ ಕೊರಗತನಿಯನಿಗೆ ಪ್ರವೇಶವನ್ನು ನಿರಾಕರಿಸುತ್ತಾರೆ. ಆಗ ಕೋಪಗೊಂಡ ಕೊರಗತನಿಯನು ಹೊರೆಯನ್ನು ದೈವಸ್ಥಾನದ ಹೊರಗೆ ಇಳಿಸಿ ತಾನು ದೈವಸ್ಥಾನದ ಹತ್ತಿರ ಹೋಗುತ್ತಾನೆ. ಅಲ್ಲಿ ಗೋಪುರದ ಮಾಡಿಗೆ ಮರದಿಂದ ಬಾಗಿಕೊಂಡಿದ್ದ ಮಾದಳದ ಹಣ್ಣನ್ನು ತಾಯಿಯ ಪ್ರೀತ್ಯರ್ಥವಾಗಿ ಕೊಡಲು ಕೈ ಹಾಕಿದಾಗ ಏಳು ವರ್ಷ ಪ್ರಾಯದ ಕೊರಗತನಿಯನು ಅಲ್ಲಿಯೇ ಮಾಯವಾಗುತ್ತಾನೆ.
ಶ್ರೀ ಪಂಜಂದಾಯ (ಪಂಜಣತ್ತಾಯ) ಬಂಟ ದೈವವು ಗಂಟೆಯ ಸ್ವರೂಪದಲ್ಲಿ ಉಕ್ಕೂರುದ ಗುಡ್ಡೆ ಎಂಬ ಹೆಸರಿನ ಕಾಡಿನಲ್ಲಿ ಕಾಣಿಸಿಕೊಂಡು ಬಳಿಕ ಭಂಡಾರಬೈಲಿನಲ್ಲಿ ನೆಲೆವೂರಿತು, ಉದ್ಯಾವರ ಮಾಡದ ಆರಸು ದೈವಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಕುತ್ತಾರು ಅರಸುಕಟ್ಟೆಯಲ್ಲಿ ಬಂದು ನೆಲೆಸುತ್ತಾರೆ, ಅವರಿಗೂ ಗ್ರಾಮ ದೈವವಾದ ಶ್ರೀ ಪಂಜಂದಾಯ ಬಂಟ ದೈವಗಳಿಗೆ ಏಳು ರಾತ್ರಿ ಏಳು ಹಗಲು ಯುದ್ಧ ನಡೆದರೂ ಸೋಲು-ಗೆಲುವು ನಿಶ್ಚಯವಾಗಲಿಲ್ಲ. ಮಾಯವಾದ ಕಾರಣಿಕದ ಶಕ್ತಿಯಾದ ಕೊರಗತನಿಯ (ಕೊರಗಜ್ಜ) ದೈವವು ಸೋಮೇಶ್ವರ ಒಂಭತ್ತು ಮಾಗಣೆಯ ಸೀಮೆ ದೇವರಾದ ಶ್ರೀ ಸೋಮನಾಥ ದೇವರಿಗೆ ದಂಟೆಯ (ಕಾಸರಕ ಮರದ ಕೋಲು) ಕಾಣಿಕೆ ಸಲ್ಲಿಸಿ, ಉದಿಪು ಕಲ್ಲಿಗೆ ಬಂದು ನೋಡುವಾಗ ಪಂಜಂದಾಯ ಬ೦ಟ ದೈವಗಳು ಚಿಂತಾಕ್ರಾಂತರಾಗಿರುವುದನ್ನು ಕಂಡಿತು.
ಕೊರಗತನಿಯ ದೈವವು ಪಂಜಂದಾಯ ಬಂಟ ದೈವಗಳಿಗೆ ದಂಟೆ ಕಾಣಿಕೆ ಸಲ್ಲಿಸಿ, ನನ್ನಿಂದ ಏನಾಗಬೇಕೆಂದು ಕೇಳುವಾಗ, ಪಂಜಂದಾಯ ದೈವಗಳು ಅರಸು ದೈವಗಳ ಆಕ್ರಮಣದ ಬಗ್ಗೆ ವಿವರಿಸುತ್ತವೆ. ಆಗ ಕೊರಗತನಿಯ ದೈವವು “ಅರಸು ದೈವಗಳನ್ನು ನಿಮ್ಮ ಪರಿಧಿಯಿಂದ ಬಿಡಿಸಿದರೆ ನನಗೇನು ಕೊಡುವಿರಿ?” ಎಂದು ಕೇಳುತ್ತದೆ. ಆಗ ಪಂಜಂದಾಯ ದೈವವು “ನಮ್ಮಿಂದ ಸಾಧ್ಯವಾಗದ ಕೆಲಸವನ್ನು ನೀನು ಮಾಡುತ್ತಿ ಎನ್ನುವ ನಂಬಿಕೆ ಏನು?” ಎಂದು ಪಶ್ನಿಸಿದಾಗ, ಕೊರಗತನಿಯ ದೈವವು ತನ್ನ ವಿರಾಟ ರೂಪವನ್ನು ತೋರಿಸುತ್ತದೆ. ಅದರ ವಿರಾಟ ರೂಪ ನೋಡಿದ ದೈವಗಳಿಗೆ ಇವನಿಂದ ಈ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಮನವರಿಕೆ ಆಗುತ್ತದೆ. “ಅರಸು ದೈವಗಳನ್ನು ನನ್ನ ವ್ಯಾಪ್ತಿಯಿಂದ ಬಿಡಿಸಿದರೆ ನಿನಗೆ ಊರಿನಲ್ಲಿ ಅಡುಗೆ ಮಾಡಿಸಿ, ಕಾಡಿನಲ್ಲಿ ಬಡಿಸಿ ನರ್ತನ ಸೇವೆ (ಬೈಲ್‌ಡ್‌ ಅಟಿಲ್, ಕಾಡ್ ಡ್ ಮೆಚ್ಚಿ) ಮಾಡಿಸಿ, ನಿನ್ನ ಏಳು ವರ್ಗ (ಏಳು ಆದಿಸ್ಥಳಗಳು) ವನ್ನು ನಿನಗೆ ಕೊಟ್ಟು, ಅಲ್ಲಿ ನಿನ್ನ ಸೇವೆ ಮಾಡಲು ಕತ್ತಲಿನಲ್ಲಿ ಬೆಂಕಿ, ಬೆಳಕು (ತೂ, ತುಡರ್) ಇಲ್ಲದೆ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿಯನ್ನು ನಿನಗೆ ನೀಡುತ್ತೇವೆ” ಎಂದು ಪಂಜಂದಾಯ ದೈವವು ಕೊರಗತನಿಯನಿಗೆ ವಾಗ್ದಾನ ನೀಡುತ್ತದೆ. ಪಂಜಂದಾಯ ದೈವದಿಂದ ವಾಗ್ದಾನ ಪಡೆದ ಕೊರಗತನಿಯನು ಕುತ್ತಾರುಗುತ್ತಿಗೆ ತೆರಳಿ ಕಪಿಲೆ ದನವನ್ನು (ಗೆಂದೆ, ಕಬುಲ್ತಿ) ಮಾಯರೂಪದಲ್ಲಿ ಸೃಷ್ಟಿ ಮಾಡಿ, ಅದನ್ನು ಕೊಂದು ಅದರ ಕಾಲು (ಪಾರೆ) ಕಡಿದು, ತನ್ನ ಶಿರಕವಚದಲ್ಲಿ (ಮುಟ್ಟಾಲೆ) ಇಟ್ಟುಕೊಂಡು, ಅರಸುಕಟ್ಟೆಯಲ್ಲಿ ವಿರಾಜಮಾನರಾದ ಅರಸು ದೈವಗಳ ಬಳಿ ತೆರಳಿ “ನೀವು ಧರ್ಮದ ಕಟ್ಟಿನ ಪ್ರಕಾರ ನಿಮ್ಮ ಜಾಗಕ್ಕೆ ಹೋಗಬೇಕು. ಇಲ್ಲದಿದ್ದರೆ ಈ ಪಾರೆಯನ್ನು (ಕಾಲು) ಎಸೆದು ನಿಮ್ಮನ್ನು ಓಡಿಸುತ್ತೇನೆ” ಎಂದು ಹೇಳುತ್ತಾನೆ. ಶುದ್ಧಾಚಾರದ ದೈವಗಳಾದ ಅರಸು ದೈವಗಳು ಪಾರೆಯನ್ನು (ಕಾಲು) ನೋಡಿ, ಅಲ್ಲಿಂದ ತಮ್ಮ ಸ್ವಕ್ಷೇತ್ರವಾದ ಉದ್ಯಾವರ ಮಾಡಕ್ಕೆ ತೆರಳುತ್ತಾರೆ.
ಆ ಪ್ರಕಾರ ತನ್ನ ಮಾತು ಉಳಿಸಿದ ಕೊರಗತನಿಯ ದೈವಕ್ಕೆ ಪಂಜಂದಾಯ ದೈವಗಳು ವಾಗ್ದಾನ ನೀಡಿದಂತೆ ಏಳು ಕಲ್ಲು, ಏಳು ವರ್ಗ ತುಂಡು ಗ್ರಾಮಗಳನ್ನು ನೀಡುತ್ತಾರೆ. ಈ ಏಳು ಆದಿಸ್ಥಳಗಳ ಮೂಲದೈವಗಳಾದ ಸಿರಿಗಳಿಗೆ ಬೇರೆ ಜಾಗವನ್ನು ಕೊಟ್ಟು ಈ ಜಾಗವನ್ನು ಕೊರಗತನಿಯನಿಗೆ ಪಂಜಂದಾಯ ದೈವವು ನೀಡಿತು. ಆದ್ದರಿಂದ ಕೊರಗತನಿಯನಿಗೆ ಕೋಲ ನಡೆಯುವ ಸಂದರ್ಭದಲ್ಲಿ ಈ ದೈವಗಳಿಗೆ ಮೊದಲ ಪ್ರಾಧಾನ್ಯತೆ ನೀಡಲಾಗುತ್ತದೆ. (ಪ್ರಥಮ ಸೇವೆ), ಸಿರಿಗಳಿಗೆ ‘ಏನ್ಮಮಂದೆ ಪಿದಾಯಿಯಾಯಿನಕುಲು’ ಮತ್ತು ‘ಮೆರರ್ ದೈವಗಳು” ಎಂದು ಕರೆಯುತ್ತಾರೆ. (ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು, ಒಂದು ಅಕ್ಕ ಮದಿಮಾಲ್ ಮತ್ತು ಗುಳಿಗೆ, ಸುಣ್ಣಲಾಯಿ ಹಾಗೂ ಪಿಲಿಭೂತ). ಅನಾದಿಕಾಲದಲ್ಲಿ ಈ ಎಲ್ಲಾ ದೈವಗಳು ಇಂದಿನ ಕೊರಗತನಿಯ ದೈವದ ಏಳು ಆದಿಸ್ಥಳಗಳಲ್ಲಿ ವಿರಾಜಮಾನವಾಗಿದ್ದವು. ಪಂಜಂದಾಯ ದೈವವು ಈ ದೈವಗಳಿಗೆ ಬೇರೆ ಸ್ಥಳಗಳನ್ನು ನೀಡಿತು. ಈ ಜಾಗವು ದೊರೆಯುವ ಮೊದಲು ಮಾಯವಾದ ಕೊರಗತನಿಯನು ಮಾಯಾ ರೂಪದಲ್ಲಿ ಸಂಚಾರ ಮಾಡಿಕೊಂಡಿದ್ದನು. ಹಿರಿಯ ತಲೆಮಾರಿನವರು ಹೇಳಿಕೊಂಡು ಬಂದ ಹಾಗೆ ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಮತ್ತು ಕೊರಗತನಿಯ ದೈವಗಳ ನೇಮ-ನಿಯಮ, ಜಾತ್ರೆ-ಕೋಲಗಳು, ಮುನ್ನೂರು ಗ್ರಾಮದ ತಂತ್ರಿಗಳ ಮಾರ್ಗದರ್ಶನದಲ್ಲಿ, ಮಾಗಣತ್ತಡಿ ಮನೆತನದವರ ಅನುವಂಶಿಕ ಆಡಳಿತದಲ್ಲಿ ಮತ್ತು ಮೂರು ಗುತ್ತುಗಳಾದ ಕುತ್ತಾರು ಗುತ್ತು, ಕಲ್ಲಾಲ ಗುತ್ತು, ಬೊಲ್ಯ ಗುತ್ತು ಹಾಗೂ ಗೇಣಿಮನೆ ಬಾಳಿಕೆಯವರ ಮುಂದಾಳತ್ವದಲ್ಲಿ ಜೊತೆಗೆ ನೂರಾರು ಸೇವಚಾಕರಿಯವರ ನಿಸ್ವಾರ್ಥ ಸೇವೆಯೊಂದಿಗೆ ಪರಂಪರೆಯಿಂದ ನಡೆದುಕೊಂಡು ಬಂದಿರುವ ಕಟ್ಟುಕಟ್ಟಲೆಗೆ ಚ್ಯುತಿಬಾರದಂತೆ ಈಗಲೂ ನಡೆದುಕೊಂಡು ಬರುತ್ತಿದೆ.
ಮಾಗಣತ್ತಡಿ ಮನೆತನದವರನ್ನು ಶ್ರೀ ಪಂಜಂದಾಯ ಹಾಗೂ ಕೊರಗತನಿಯ ದೈವವು ‘ಕಲ್ಲಾಲಗುತ್ತು’ ಎಂದು ಸಂಬೋಧಿಸುತ್ತದೆ. ಶ್ರೀ ಪಂಜಂದಾಯ ಬಂಟ ಕೊರಗತನಿಯ ದೈವದ ಆಭರಣ ಹಾಗೂ ಕೊರಗತನಿಯ ಮತ್ತು ಗುಳಿಗ ದೈವದ ಭಂಡಾರ (ದಂಟೆ, ಮುಟ್ಟಾಳೆ, ತ್ರಿಶೂಲ) ಮಾಗಣತ್ತಡಿ ಮನೆಯಲ್ಲಿಯೇ ಇರುವುದು ಕಟ್ಟಳೆಯಾಗಿದೆ. ಡಿಸೆಂಬರ್ ತಿಂಗಳ ನಿಗದಿಯಾದ ದಿನದಂದು ಮಾಗಣತ್ತಡಿ ಮನೆಯಿಂದ ಕೊರಗತನಿಯ ಮತ್ತು ಗುಳಿಗನ ಭಂಡಾರ ಹೋಗಿ, ಕೊರಗತನಿಯನ ಏಳು ಆದಿ ಸ್ಥಳಗಳಲ್ಲಿ ಒಂದಾಗಿರುವ ದೇರಳಕಟ್ಟೆ, ಆದಿಸ್ಥಳದಲ್ಲಿ (ಕಂತ್ತಿಕಲ್ಲ್) ಕೊರಗತನಿಯನ ಕೋಲ ಹಾಗೂ ಗುಳಿಗನ ಕಟ್ಟೆಯಲ್ಲಿ ಗುಳಿಗ ಕೋಲವು ಒಂದೇ ಸಮಯದಲ್ಲಿ ನಡೆದು. ಗುಳಿಗ ದೈವವು ಕೊರಗತನಿಯನ ದೇರಳಕಟ್ಟೆ ಆದಿಸ್ಥಳಕ್ಕೆ ಬಂದು ಕೊರಗತನಿಯನ ಹಾಗೂ ಗುಳಿಗನ ಭೇಟಿ ನಡೆಯುವುದು ಇಲ್ಲಿ ಅನಾಧಿಕಾಲದಿಂದಲೂ ನಡೆಯುವ ಸಂಪ್ರದಾಯ, ಇದು ಇಂದಿಗೂ ನಡೆದುಕೊಂಡು ಬರುತ್ತಿದೆ.
ಕೊರಗತನಿಯನ ಏಳು ಆದಿಸ್ಥಳಗಳಲ್ಲಿ ಯಾವುದೇ ರೀತಿಯ ಗುಡಿಗೋಪುರಗಳು, ಮೂರ್ತಿ ಆರಾಧನೆಗಳು, ದೀಪಧೂಪ ಇಂತಹ ಆರಾಧನೆಗಳಿಗೆ ಆಸ್ಪದವಿಲ್ಲ. ಇದು ಅನಾದಿಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ.
ಕೊರಗತನಿಯ ದೈವದ (ಕೊರಗಜ್ಜನ) ಏಳು ಆದಿಸ್ಥಳಗಳು:
ಅನಾದಿಕಾಲದಲ್ಲಿ ಗ್ರಾಮದೈವಗಳಾದ ಶ್ರೀ ಪಂಜಂದಾಯ ಬಂಟ ದೈವಗಳಿಗೂ, ಕನೀರುತೋಟ ಶ್ರೀ ಮಲೆಯಾಳಿ ಚಾಮುಂಡಿ ದೈವಗಳಿಗೂ ಕಲಹ ಉಂಟಾದ ಸಮಯದಲ್ಲಿ ವೈದ್ಯನಾಥ ದೈವವು ಶ್ರೀ ಸೋಮನಾಥ ದೇವರ ಅನುಗ್ರಹವನ್ನು ಪಡೆದು ಈ ದೈವಗಳ ನಡುವೆ ರಾಜಿಪಂಚಾತಿಕೆ ಮಾಡಲು ಮುಂದಾಗುತ್ತದೆ. ಶ್ರೀ ವೈದ್ಯನಾಥ ದೈವವು ಶ್ರೀ ಪಂಜಂದಾಯ ದೈವದ ಬಳಿ ಇದ್ದ ಬೆಳ್ಳಿ ಚೆಂಡನ್ನು ಎಸೆಯಲು ಹೇಳುತ್ತದೆ. ಬಾರ್ದೆಕಟ್ಟ ಎನ್ನುವ ಸ್ಥಳದಿಂದ ಎಸೆದ ಆ ಚೆಂಡು ಕನ್ನಡಕೆರೆಗೆ ಬಂದು ಬೀಳುತ್ತದೆ. ಈ ಪರಿಧಿಯು ಶ್ರೀ ಪಂಜಂದಾಯ ದೈವದ ಪರಿಧಿಯೆಂದು ವೈದ್ಯನಾಥ ದೈವವು ತೀರ್ಮಾನಿಸುತ್ತದೆ. ಮಲೆಯಾಳಿ ಚಾಮುಂಡಿ ದೈವದ ಬಳಿ ಇದ್ದ ಕಂಚಿನ ಚೆಂಡನ್ನು ಬಾರ್ದೆಕಟ್ಟೆ ಎಂಬ ಸ್ಥಳದಿಂದ ಎಸೆದಾಗ ಕನೀರುತೋಟದ ಬಳಿಯ ಕೆದಿಲಾಯ ಕಟ್ಟೆಗೆ ಬಂದು ಬೀಳುತ್ತದೆ.
ಈ ಚೆಂಡು ಬಿದ್ದ ಜಾಗವನ್ನು ಮಲೆಯಾಳಿ ಚಾಮುಂಡಿ ದೈವಗಳ ಪರಿಧಿಯೆಂದು ವೈದ್ಯನಾಥ ದೈವವು ತೀರ್ಮಾನಿಸುತ್ತದೆ. ತಮ್ಮ ಕಲಹವನ್ನು ಪರಿಹರಿಸಿದ ವೈದ್ಯನಾಥ ದೈವಕ್ಕೆ ಶ್ರೀ ಪಂಜಂದಾಯ ಬಂಟ ದೈವಗಳು ತಮ್ಮ ಸಿರಿಮುಡಿಯಲ್ಲಿಯೇ ಸೇವೆ ಕೊಡುತ್ತೇವೆಂದು ವಾಗ್ದಾನ ನೀಡುತ್ತಾರೆ. ಇಂದಿಗೂ ಈ ಸಂಪ್ರದಾಯ ನಡೆಯುತ್ತಿದೆ. ತುಳು ಸಂಸ್ಕೃತಿಯ ಆಟಿ ತಿಂಗಳು ಕಳೆದು ಸೋಣ ಸಂಕ್ರಮಣದಂದು ಶ್ರೀ ಪಂಜಂದಾಯ ಬಂಟ ವೈದ್ಯನಾಥ ದೈವಗಳಿಗೆ ಗ್ರಾಮದ ವತಿಯಿಂದ ರಾತ್ರಿ ತುಡರ ಬಲಿ ಸೇವೆ, ಶ್ರೀ ಪಂಜಂದಾಯದ ದೈವದ ಅಪ್ಪಣೆಯಂತೆ ಕೊರಗತನಿಯ ದೈವದ ಎರಡು ಆದಿಸ್ಥಳಗಳಲ್ಲಿ [1. ದೆಕ್ಕಾಡು ಮಂಜಪಲ್ತಮಣ್ಣು 2. ಸ್ವಾಮಿತಲ (ಸೋಮೇಶ್ವರ)] ಗ್ರಾಮದ ವತಿಯಿಂದ ಎರಡು ಕೋಲಗಳನ್ನು ನಡೆಸುವುದು; ಉಳಿದ ಐದು ಆದಿಸ್ಥಳಗಳಲ್ಲಿ ಭಂಡಾರದ ವತಿಯಿಂದ ಕೋಲಗಳನ್ನು ನಡೆಸಿ, ನಂತರ ಭಕ್ತರ ಹರಕೆಯ ಕೋಲಗಳನ್ನು ನಡೆಸುವುದು ಇಲ್ಲಿನ ಸಂಪ್ರದಾಯ: ಕೊರಗತನಿಯ ದೈವದ ಆದಿಸ್ಥಳಗಳಲ್ಲಿ ಆರರಲ್ಲಿ ಭಕ್ತರ ಹರಕೆಯ ಕೋಲಗಳನ್ನು ನಡೆಸಬಹುದು; ಒಂದು ಆದಿಸ್ಥಳದಲ್ಲಿ (ಸ್ವಾಮಿತಲ ಸೋಮೇಶ್ವರ) ಗ್ರಾಮದ – ವಂತಿಕೆಯ ಒಂದು ಕೋಲ ನಡೆಸುವುದು. ಇದು ಅನಾದಿಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ ಕೊರಗತನಿಯ ದೈವಕ್ಕೆ ಹಿಂದಿನ ಕಾಲದಲ್ಲಿ ‘ತಡ್ಪೆದ ಅಗೆಲು ಸೇವೆ’ಯನ್ನು ತಮ್ಮ ತಮ್ಮ ಮನೆಗಳಲ್ಲೇ ಸಲ್ಲಿಸುತ್ತಿದ್ದರು. ಇದನ್ನು ಹರಕೆ ಹೇಳಿದವರ ಮನೆಯಲ್ಲಿ ಎಲ್ಲಿಯೂ ನಡೆಸಬಹುದು. ಕೊರಗತನಿಯ ದೈವದ ಆದಿಸ್ಥಳಗಳಲ್ಲಿ ಅಗೆಲು ನೀಡುವ ಸಂಪ್ರದಾಯವಿಲ್ಲ. ಈ ಅಗೆಲು ಹರಕೆ ನೀಡಲು ಯಾವುದೇ ಸ್ಥಳ ಪ್ರದೇಶಗಳ ನಿಯಮವಿಲ್ಲ; ಅದನ್ನು ಎಲ್ಲಿಯೂ ನಡೆಸಬಹುದು.